ನದೀ ಕಣಿವೆ ಯೋಜನೆ -
ನದಿ, ಉಪನದಿ ಅಥವಾ ತೊರೆಗಳ ಸಣ್ಣ ಕಣಿವೆಗಳಿಗೆ ಮಣ್ಣಿನ ಒಡ್ಡುಗಳನ್ನು ಹಾಕಿ ಕೆರೆಕಟ್ಟೆಗಳನ್ನು ನಿರ್ಮಿಸಿ ಕುಡಿಯುವ ನೀರು ಹಾಗೂ ಇತರ ದಿನನಿತ್ಯದ ಬಳಕೆಗಾಗಿ ಅಲ್ಲದೆ ನೀರಾವರಿ ವ್ಯವಸಾಯಕ್ಕಾಗಿ ಉಪಯೋಗಿಸುವ ಏರ್ಪಾಡು. ಅನುಕೂಲವಾಗಿರುವ ಸ್ಥಳಗಳಲ್ಲಿ ಹಿಡಿತಕ್ಕೆ ಸಿಗುವ ನದಿಗಳಿಗೆ ಅಡ್ಡ ಕಲ್ಲಿನ ಅಣೆಗಳನ್ನು ಕಟ್ಟಿ ಹಲವಾರು ಕಿಲೊಮೀಟರುಗಳ ದೂರ ತೋಡಿರುವ ಕಾಲುವೆಗಳಿಗೆ ನೀರನ್ನು ತಿರುಗಿಸಿ ನದಿಯ ಅಂಚಿನ ಪ್ರದೇಶಗಳನ್ನು ಪೈರಿನಿಂದ ಹಚ್ಚಹಸಿರಾಗಿಸುವುದು, ಅಡ್ಡಿ ಆಂತಂಕಗಳಿಲ್ಲದೆ ನದಿಯ ಉದ್ದಕ್ಕೂ ಜನ ಹಾಗೂ ಸಾಮಗ್ರಿಗಳ ಸಾಗಣೆಗೆ ನಾವೆಗಳನ್ನು ಒದಗಿಸುವುದು, ಎತ್ತರದಿಂದ ತಗ್ಗಿಗೆ ನೀರು ದುಮುಕುವ ಜಾಗಗಳಲ್ಲಿ ವಿದ್ಯುದುತ್ಪಾದನೆ ಇವೆಲ್ಲವೂ ನದೀಕಣಿವೆಯೋಜನೆಯ ಫಲವಾಗಿ ಸಾಧ್ಯವಾಗಿವೆ. ಆದರೆ ಇವೆಲ್ಲ ಅಲ್ಲಲ್ಲಿಯ ಪ್ರಯೋಜನಕ್ಕೆ ಅನುವಾದ ಸ್ಥಳೀಯ ಪ್ರಯತ್ನಗಳು. ಇಂಥ ಕಾರ್ಯಗಳು ಹೀಗೆಯೇ ಮುಂದುವರಿದಂತೆ ಆಸಕ್ತಿಗಳ ತಾಕಲಾಟದಿಂದ ಪ್ರಾದೇಶಿಕ, ಅಂತರ ರಾಜ್ಯ ಮತ್ತು ಅಂತರ್ದೇಶೀಯ ವಿವಾದಗಳೇಳುತ್ತವೆ. ವೈಮನಸ್ಸು ಹಾಗೂ ಸಮರಗಳಿಗೂ ಇವು ಕಾರಣವಾಗುವುದುಂಟು. ಅಲ್ಲದೇ ಈ ಪ್ರತ್ಯೇಕ ಪ್ರಯತ್ನಗಳಿಂದಾಗಿ ಲಭ್ಯವಿರುವ ಜಲಸಂಪತ್ತಿನ ಗರಿಷ್ಠ ಪ್ರಯೋಜನವನ್ನು ಪಡೆಯಲು ಸಾಧ್ಯವಾಗದೇ ಇರಬಹುದು; ಅಥವಾ ಅನಾವಶ್ಯಕವಾಗಿ ಹೆಚ್ಚಿನ ವೆಚ್ಚವಾಗಬಹುದು; ಪ್ರಾದೇಶಿಕ ಅಸಮತೆಗಳಿಗೂ ಅಸಂತೃಪ್ತಿಗೂ ಕಾರಣವಾಗಬಹುದು. ಇಡೀ ನದಿಯ ಕಣಿವೆಯನ್ನು ಸಮಗ್ರವಾಗಿ ಪರಿಶೀಲಿಸಿ ಅತ್ಯಧಿಕ ಪ್ರಯೋಜನ ಲಭಿಸುವಂತೆ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುವುದು ಈ ರೀತಿಯ ತೊಂದರೆಗಳಿಗೆ ಒಂದು ಪರಿಹಾರ. ಒಂದೇ ರಾಜ್ಯದಲ್ಲಿ ಹರಿಯುವ ನದಿಯಾದರೆ ಹೆಚ್ಚಿನ ಸಮಸ್ಯೆಗಳಿರುವುದಿಲ್ಲ. ಆದರೆ ಸಾಮಾನ್ಯವಾಗಿ ದೊಡ್ಡ ನದಿಗಳು ಹಲವು ರಾಜ್ಯಗಳ ಅಥವಾ ಹಲವು ದೇಶಗಳ ಮೂಲಕ ಹರಿಯುವುವಾದ್ದರಿಂದ ಆಯಾ ರಾಜ್ಯ ಅಥವಾ ದೇಶಗಳ ವರಿಷ್ಠರಲ್ಲಿ ದೂರದೃಷ್ಟಿ ಹಾಗೂ ಒಡಂಬಡಿಕೆಗಳಿದ್ದರೆ ಮಾತ್ರ ಇದು ಸಾಧ್ಯವಾಗುತ್ತದೆ. ಕೆಲವು ವೇಳೆ ದೊಡ್ಡ ನದಿಗಳಿಗಾಗಿ ರೂಪಿಸಿದ ಬೃಹದ್ಯೋಜನೆಗಳಿಗೆ ತಗಲುವ ಅಗಾಧ ವೆಚ್ಚವನ್ನು ಭರಿಸಲು ಯಾವ ಒಂದೇ ರಾಜ್ಯ ಅಥವಾ ದೇಶಕ್ಕೆ ಸಾಮಥ್ರ್ಯ ಸಾಲದೆ ಇದಕ್ಕೂ ಒಟ್ಟಾರೆ ಪ್ರಯತ್ನ ಅವಶ್ಯವಾಗಬಹುದು. ಹಕ್ಕುಗಳನ್ನು ರೂಪಿಸಲು ಪರಸ್ಪರ ಸಮ್ಮತಿಯಿಂದ ಗರಿಷ್ಠ ಅಧಿಕಾರವುಳ್ಳ ಮಂಡಳಿಗಳನ್ನು ರಚಿಸಬೇಕಾಗುತ್ತದೆ. ಹೀಗೆ ಸಮಗ್ರ ದೃಷ್ಟಿಯಿಂದ ರೂಪಿಸಿದ ಯೋಜನೆಗಳೇ ನದೀ ಕಣಿವೆ ಯೋಜನೆಗಳು.

	ಯಾವುದೇ ನದೀ ಕಣಿವೆ ಯೋಜನೆಯನ್ನು ಸಾಮಾನ್ಯವಾಗಿ ಒಂದು ಉದ್ದೇಶ ಇಟ್ಟುಕೊಳ್ಳದೆ ಹಲವು ಉದ್ದೇಶಗಳನ್ನು ಇಟ್ಟುಕೊಂಡು ರೂಪಿಸಲಾಗುತ್ತದೆ. ಹಾಗೆ ಮಾಡುವುದರಿಂದ ಯೋಜನೆಗೆ ಹಣಕಾಸು ದೃಷ್ಟಿಯಿಂದ ಹೆಚ್ಚಿನ ಸಾರ್ಥಕತೆ ಒದಗುವುದಲ್ಲದೆ ಅದಕ್ಕೆ ತೊಡಗಿಸಬೇಕಾದ ಅಗಾಧ ಬಂಡವಾಳಕ್ಕೆ ತಕ್ಕ ಸಮರ್ಥನೆಯೂ ದೊರಕುತ್ತದೆ. ಇಂಥ ಉದ್ದೇಶಗಳಲ್ಲಿ ಮುಖ್ಯವಾದವು ನೀರಾವರಿ, ವಿದ್ಯುದುತ್ಪಾದನೆ, ನಾಗರಿಕ ನೀರು ಸರಬರಾಜು, ಪ್ರವಾಹ ನಿಯಂತ್ರಣ, ಕೈಗಾರಿಕಾ ಉಪಯೋಗ, ಮತ್ಸ್ಯ ಕೃಷಿ, ವನ್ಯಜೀವಿ ಸಂರಕ್ಷಣೆ, ಜಲಮಾರ್ಗ ಸೌಕರ್ಯಗಳನ್ನು ಒದಗಿಸುವುದು, ಮನೋರಂಜನೆ ಇತ್ಯಾದಿ. ಈ ಉದ್ದೇಶಗಳಲ್ಲಿ ಕೆಲವು ಮಾತ್ರ ಒಂದಕ್ಕೊಂದು ಹೊಂದಿಕೊಳ್ಳಬಹುದಾದರೂ ಎಲ್ಲವೂ ಈ ರೀತಿ ಆಗುವುದಿಲ್ಲ. ಹೀಗಾಗಿ ಒಂದೇ ಉದ್ದೇಶದಲ್ಲಿ ದೊರೆಯಬಹುದಾದ ಪ್ರಯೋಜನದ ಕೆಲವು ಅಂಶವನ್ನಾದರೂ ಬೇರೆಯ ಉದ್ದೇಶಗಳನ್ನು ಅಳವಡಿಸುವ ದೃಷ್ಟಿಯಿಂದ ಕೈಬಿಡಬೇಕಾಗಬಹುದು. ಪ್ರತಿಯೊಂದು ಉದ್ದೇಶದ ಅಗತ್ಯತೆಗಳನ್ನು ಲೆಕ್ಕ ಹಾಕಿ, ಅವಕ್ಕೆ ತಕ್ಕ ಪ್ರಾಧಾನ್ಯ ನೀಡಿ, ಒಟ್ಟಿನಲ್ಲಿ ಹೆಚ್ಚು ಪ್ರಯೋಜನಕಾರಿಯಾಗುವಂತೆ ಯೋಜನೆಯನ್ನು ಸಮತೋಲಗೊಳಿಸಬೇಕಾಗುತ್ತದೆ.

	ನೀರಾವರಿ ಹಾಗೂ ವಿದ್ಯುದುತ್ಪಾದನೋದ್ದೇಶಗಳನ್ನು ಸಂಯೋಜಿಸುವುದು ಇದ್ದುದರಲ್ಲಿ ಸುಲಭ ಎನ್ನಬಹುದು. ನೀರಾವರಿಯ ಸಾಫಲ್ಯಕ್ಕೆ ಆಯಾ ಕಾಲದ ಅಗತ್ಯತೆಗೆ ತಕ್ಕಂತೆ ಸಾಕಷ್ಟು ನೀರು ಹರಿಸಲಾಗುವ, ಬೆಳೆಗಳಿಗಾಗಲಿ ಅವು ನಿಂತಿರುವ ಮಣ್ಣಿನ ಗುಣಕ್ಕಾಗಲಿ ಮಾರಕವಾಗದಿರುವಂಥ ಲಕ್ಷಣಗಳುಳ್ಳ, ನ್ಯಾಯವಾದ ಹಾಗೂ ಸುಲಭ ಬೆಲೆಯಲ್ಲಿ ದೊರೆಯಬಹುದಾದ ಸಾಕಷ್ಟು ಪರಿಮಾಣದ ನೀರಿನ ಶೇಖರಣೆ ಇರಬೇಕು. ನಾಲೆಗಳಲ್ಲಿ ನೀರನ್ನು ಬಲುದೂರ ಹರಿಸಲು ಸಾಧ್ಯವಾಗುವಂತೆ ತಳದ ಓಟ ದೊರೆಯಲು ಇಂಥ ಜಲಾಶಯ ಉನ್ನತವಾದ ನೀರಿನ ಮಟ್ಟವನ್ನು ಒದಗಿಸಬೇಕು.

	ಸಂಗ್ರಹಿಸಿರುವ ನೀರಿನ ಪರಿಮಾಣ ಹಾಗೂ ಅದನ್ನು ಕೆಳಕ್ಕೆ ಬಿಡುವ ಮುನ್ನ ದೊರೆಯುವ ಬೀಳೆತ್ತರಗಳಿಗೆ ಅನುಗುಣವಾಗಿ ವಿದ್ಯುದುತ್ಪಾದನ ಸಾಮಥ್ರ್ಯ ಇರುವುದು. ನೀರಾವರಿಯ ಬಳಕೆಯಲ್ಲಿ ನೀರು ವ್ಯಯವಾಗಿ ಹೋಗುವುದಾದರೆ ವಿದ್ಯುದುತ್ಪಾದನೆಯಲ್ಲಿ ನೀರ್ಬೀಳಿನ ಪ್ರಯೋಜನವನ್ನು ಮಾತ್ರ ಪಡೆಯಲಾಗುವುದರಿಂದ ನೀರು ವ್ಯಯವಾಗುವುದಿಲ್ಲ. ಆದ್ದರಿಂದ ಜಲಾಶಯದಲ್ಲಿ ಶೇಖರಿಸಿರುವ ನೀರನ್ನು ಮೊದಲು ವಿದ್ಯುದುತ್ಪಾದನೆಗೆ ಬಳಸಿ ಅನಂತರ ನೀರಾವರಿಗೆ ಬಿಡಬಹುದಾದ ಸಾಧ್ಯತೆ ಉಂಟು. ಒಂದು ಆತಂಕವೆಂದರೆ ನೀರಾವರಿಯ ಬಳಕೆಗಾಗಿ ನೀರಿನ ಬೇಡಿಕೆ ಕಾಲಿಕವಾದದ್ದು; ಮತ್ತು ಆಯಾ ಕಾಲಕ್ಕೆ ಇಷ್ಟೇ ಎಂದು ನಿಯತವಾಗಬಹುದಾದದ್ದು. ಆದರೆ ವಿದ್ಯುದುತ್ಪಾದನೆಗೆ ನೀರು ಸದಾ ಕಾಲ ಬೇಕಾಗಿದ್ದು ಏರುಪೇರುಗಳಿಗೂ ಒಳಗಾಗಿರುತ್ತದೆ. ಅಂಥ ವೇಳೆಗಳಲ್ಲಿ ನೀರಿನ ಬಳಕೆ ಏಕೋದ್ದೇಶಿತವಾಗಿರುತ್ತದೆ; ಅಥವಾ ನೀರಿನ ಮಿತವ್ಯಯಕ್ಕಾಗಿ ಉಷ್ಣ ಶಕ್ತಿಯಂಥ ಇತರ ಮೂಲಗಳನ್ನು ಅವಲಂಬಿಸಬೇಕಾಗುತ್ತದೆ.

	ನಾಗರಿಕ ನೀರು ಸರಬರಾಜಿಗೂ ಬೇಕಾಗುವುದು ಇಂಥದೇ ಒಂದು ಆದರೆ ಸಾಕಷ್ಟು ಶುದ್ಧವಾದ, ನೀರಿನ ಸಂಗ್ರಹ. ಈ ಉದ್ದೇಶದ ನೀರಿನ ಬೇಡಿಕೆ ವರ್ಷವೆಲ್ಲ ಏಕಪ್ರಕಾರವಾಗಿದ್ದು ಬೇಸಗೆಯಲ್ಲಿ ಕೊಂಚ ಅಧಿಕವಾಗುತ್ತದೆ. ನಗರದ ಬೆಳವಣಿಗೆಯಿಂದಾಗಿ ವರ್ಷವರ್ಷಕ್ಕೂ ಇದು ಹೆಚ್ಚು ಹೆಚ್ಚು ಆಗುತ್ತದೆ. ಭವಿಷ್ಯದ ದೃಷ್ಟಿಯಿಂದಲೂ ಒಮ್ಮೊಮ್ಮೆ ಸಂಭವಿಸುವ ಮಳೆಗಾಲದ ವರ್ಷಗಳಿಗಾಗಿಯೂ ಉಳಿಸಿಕೊಂಡಿರುವ ಆಪತ್‍ಸಂಗ್ರಹ ಇದ್ದೇ ತೀರಬೇಕು. ಒಮ್ಮೊಮ್ಮೆ ಒಂದೇ ಜಲಾಶಯವನ್ನು ನೀರಾವರಿ ಹಾಗೂ ನಾಗರಿಕ ನೀರು ಸರಬರಾಜುಗಳಿಗಾಗಿ ನಿರ್ಮಿಸಲಾಗಿದ್ದರೂ ಇದರಲ್ಲಿ ಕೆಲವು ಮೂಲಭೂತ ಸಂಘರ್ಷಗಳೇಳುತ್ತವೆ. ನೀರಾವರಿಯಲ್ಲಿ ದೊರಕುವ ಲಾಭದಿಂದಾಗಿ ನೀರಾವರಿ ಪ್ರದೇಶವನ್ನು ವಿಸ್ತರಿಸುತ್ತಲೇ ಹೋಗುವ ಅಚ್ಚುಕಟ್ಟುದಾರರಿಗೆ ತಮ್ಮ ಬಳಕೆಗೆ ದೊರೆಯದೆ ಜಲಾಶಯದಲ್ಲಿ ಉಳಿದುಹೋಗುವ ನೀರಿನ ಸಂಗ್ರಹದ ಮೇಲೆ ಸದಾ ಕಣ್ಣಿರುತ್ತದೆ. ರಾಜಕೀಯ ಮುಂತಾದ ಕಾರಣಗಳಿಗಾಗಿ ಈ ಬಗ್ಗೆ ನಿಯಂತ್ರಣ ಒಮ್ಮೊಮ್ಮೆ ಸಡಿಲವಾಗುವ ಸಂಭವವೂ ಉಂಟು. ಸರಾಸರಿ ಮಳೆಯ ವರ್ಷಗಳಲ್ಲಿ ಇದು ಅನುಕೂಲಕರವಾಗಿ ಕಂಡರೂ ಮಳೆಯ ಅಭಾವದ ವರ್ಷಗಳಲ್ಲಿ ತೀವ್ರ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ನೀರಾವರಿಯಲ್ಲಿ ಸಂಭವಿಸಲಿರುವ ನಷ್ಟವನ್ನು ತಪ್ಪಿಸಿಕೊಳ್ಳಲು ಆಸಕ್ತ ಜನರಿಂದ ಅಗಾಧ ಒತ್ತಡ, ನಿಸ್ಸಹಾಯಕ ನಾಗರಿಕರು ಕುಡಿಯುವ ನೀರಿನ ಕ್ಷಾಮಕ್ಕೆ ತುತ್ತಾಗದಂತೆ ಕಾಪಾಡಿಕೊಳ್ಳುವ ಎಚ್ಚರ ಎರಡನ್ನೂ ಏಕಕಾಲಕ್ಕೆ ಎದುರಿಸಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಸಾಮಾನ್ಯವಾಗಿ ಈ ಎರಡೂ ಉದ್ದೇಶಗಳನ್ನು ಒಟ್ಟುಗೂಡಿಸದೆ ಪ್ರತ್ಯೇಕ ಜಲಾಶಯಗಳಿಂದಲೇ ಇವನ್ನು ನಿರ್ವಹಿಸಲಾಗುತ್ತದೆ.  

	ಮೇಲಿನ ಮೂರು ಉದ್ದೇಶಗಳಿಗೂ ಬೇಕಾಗಿರುವುದು ನೀರಿನ ಸಂಗ್ರಹ ಅಥವಾ ನೀರು ತುಂಬಿರುವ ಜಲಾಶಯಗಳು. ಪ್ರವಾಹ ನಿಯಂತ್ರಣದ ಅಗತ್ಯತೆ ತದ್ವಿರುದ್ಧ. ಅಲ್ಲಿ ಬೇಕಾಗಿರುವುದು ಭರ್ತಿಯಾಗಿರುವ ಜಲಾಶಯವಲ್ಲ. ಸದಾ ಅರಕೆಯಾಗಿದ್ದು ಇದ್ದಕ್ಕಿದ್ದಂತೆ ನದಿಯಲ್ಲಿ ಪ್ರವಾಹ ಬಂದೊಡನೆ ಅದನ್ನು ಸಾಧ್ಯವಾದಷ್ಟು ತಡೆಹಿಡಿದು, ಪ್ರವಾಹದ ಉಗ್ರತೆಯನ್ನು ಶಾಂತಗೊಳಿಸಿ, ಜೀವ ಮತ್ತು ಆಸ್ತಿಪಾಸ್ತಿಗಳನ್ನು ಅಪಾಯದಿಂದ ಪಾರುಮಾಡಲು ಸಾಧ್ಯವಾಗಿಸುವ ಸಂಗ್ರಹಸಾಮಥ್ರ್ಯ. ಪ್ರವಾಹಗಳ ಸಂಭವನೀಯ ಅನಿರೀಕ್ಷಿತತೆಯಿಂದಾಗಿ ಈ ಏರ್ಪಾಡುಗಳು ಏನಿದ್ದರೂ ಮಾನವಾಲಂಬಿತವಾಗಿರದೆ ಸ್ವಯಂನಿಯಂತ್ರಣಕ್ಕೆ ಒಳಪಟ್ಟಿರಬೇಕು.

	ಜಲ ಸಾರಿಗೆ ಮಿಕ್ಕ ಸಾರಿಗೆಯ ವಿಧಾನಗಳಿಗಿಂತ ಅಗ್ಗವಾದದ್ದು. ನದಿಯ ಪಾತ್ರದಲ್ಲೇ ಆಗಲಿ ಸಾಕಷ್ಟು ಅಗಲವಿರುವ ನಾಲೆಗಳಲ್ಲೇ ಆಗಲಿ ಜಲಯಾನ ಸಾಧ್ಯವಾಗಬೇಕಾದರೆ ಅವುಗಳಲ್ಲಿ ಸದಾ ತಕ್ಕಷ್ಟು ಆಳದ ನೀರು ಪ್ರವಹಿಸುತ್ತಿರಬೇಕು. ಜಲಾಶಯಗಳಲ್ಲಿ ಸಂಗ್ರಹಿಸಿದ ನೀರನ್ನು ಹೀಗೆ ಉಪಯೋಗಿಸುವಾಗ ನೀರಿನ ಅಗತ್ಯತೆ ಕಾಲಕಾಲಕ್ಕೆ ವ್ಯತ್ಯಾಸವಾಗುವುದಿದ್ದು ಬೇಸಗೆಯಲ್ಲಿ ಬೇಡಿಕೆ ಹೆಚ್ಚಾಗಿರುತ್ತದೆ. ಜಲಯಾನ ಸೌಕರ್ಯಕ್ಕಾಗಿ ನದಿಯ ಉದ್ದಕ್ಕೂ ಹಲವು ಕಟ್ಟೆಗಳನ್ನು ಕಟ್ಟಿ ಜಲಾಶಯಗಳನ್ನು ನಿರ್ಮಿಸಿದಾಗ ಅಂಥ ಕಟ್ಟೆಗಳನ್ನು ದಾಟಿ ಮುಂದೆ ಹೋಗಲು ಅನುವಾಗುವಂತೆ ಮಟ್ಟ ಬದಲಾವಣೆಯ ಬೀಗ ಏರ್ಪಾಡನ್ನು ಮಾಡಬೇಕಾಗಿರುವುದರಿಂದ ಇಂಥ ಕಟ್ಟೆಗಳ ಎತ್ತರ ಅಷ್ಟು ಹೆಚ್ಚಾಗಿರಬಾರದು. ನೀರಾವರಿಯ ಅಗತ್ಯತೆಯನ್ನು ಪೂರೈಸಲು ಹೆಚ್ಚು ಶೇಖರಣೆಗಾಗಿ ಬೇಕಾಗುವ ಎತ್ತರದ ಕಟ್ಟೆಗಳು ಈ ಉದ್ದೇಶದಲ್ಲಿ ಅಸಮಂಜಸವಾಗುವುದನ್ನು ಕಾಣಬಹುದು. ಕಾಲುವೆಗಳಲ್ಲೂ ಅಷ್ಟೆ. ಬರಿಯ ನೀರಾವರಿಗೆ ಆಗಿರುವ ನಾಲೆಯಲ್ಲಿ ಮುಂದೆ ಹೋದಂತೆ ಅಗಲ ಆಳಗಳು ಕ್ರಮೇಣ ಕಡಿಮೆಯಾಗುತ್ತವೆ. ಭೂಪದರಕ್ಕೆ ಅನುಗುಣವಾಗಿ ವೇಗ ಕೊಂಚ ಹೆಚ್ಚಾಗಿರಲೂ ಸಾಧ್ಯ. ಅದೇ ನಾಲೆಯನ್ನು ಜಲಯಾನಕ್ಕೂ ಉಪಯೋಗಿಸಿದಾಗ ಅಗಲ ಆಳಗಳೂ ನಿಗದಿಯಾದ ಪ್ರಮಾಣಕ್ಕಿಂತ ಕಡಿಮೆ ಆಗುವಂತಿಲ್ಲ. ನೀರಿನ ವೇಗವೂ ಒಂದು ಮಿತಿಯನ್ನು ಮೀರುವಂತಿಲ್ಲ. ಹೀಗಾಗಿ ಬರಿಯ ನೀರಾವರಿಗಾಗಿಯೇ ಉಪಯುಕ್ತ ಆಗಬಹುದಾಗಿದ್ದುದರ ಪರಿಮಾಣ ಅಷ್ಟು ಮಟ್ಟಿಗೆ ಕಡಿಮೆ ಆಗುತ್ತದೆ.

	ಸಾಮೂಹಿಕ ವಿಶ್ರಾಂತಿಧಾಮ ಮತ್ತು ಮನೋರಂಜನೆ ಸೌಲಭ್ಯಗಳಿಗಾಗಿಯೂ ನದಿಯ ನೀರು ಬಳಕೆಗೆ ಬರುತ್ತದೆ. ಸಣ್ಣ ಕೊಳಗಳನ್ನು ನಿರ್ಮಿಸಿ ಅಥವಾ ಇತರ ಉದ್ದೇಶದ ದೊಡ್ಡ ಜಲಾಶಯಗಳ ತೀರ ಸ್ಥಳಗಳಲ್ಲಿಯೇ ಈಜು ಸೌಕರ್ಯ, ನೌಕಾ ವಿಹಾರ, ಸ್ನಾನಘಟ್ಟಗಳು, ವಿಶ್ರಾಂತಿ ಗೃಹಗಳು ಇವುಗಳ ಏರ್ಪಾಡು ಸಾಧ್ಯ. ಅಂಥ ಕಡೆ ಇಂಗಿ ಹೋಗದ ಒಂದು ನೀರಿನ ಮಟ್ಟವನ್ನೂ ಮಾಲಿನ್ಯದ ನಿವಾರಣೆಯಿಂದ ಯುಕ್ತ ಪ್ರಮಾಣದ ಪರಿಶುದ್ಧತೆಯನ್ನೂ ಕಾಪಾಡಿಕೊಳ್ಳುವಂತಿರಬೇಕು. ಅಗತ್ಯ ರಕ್ಷಣೆ, ಏಕಾಂತತೆ ಮತ್ತು ಇತರ ಸೌಲಭ್ಯಗಳು ದೊರೆಯುವಂತಿರಬೇಕು. ಜಲಾಶಯದ ತೀರ ಪ್ರದೇಶ ಚೊಕ್ಕಟವಾಗಿಯೂ ಸುಂದರ ಪರಿಸರವುಳ್ಳದ್ದಾಗಿಯೂ ಇರಬೇಕು.

	ವಿವಿಧ ಬಗೆಯ ಜಲಚರಗಳಿಗೂ ಪಕ್ಷಿಗಳಿಗೂ ಆಶ್ರಯ ಕೊಟ್ಟು ಅವನ್ನು ಅಭಿವೃದ್ಧಿಪಡಿಸುವುದೂ ಯೋಜನೆಯ ಅಂಗಗಳಲ್ಲಿ ಒಂದಾಗಿರಬಹುದು. ತನ್ನಷ್ಟಕ್ಕೆ ತಾನೇ ಇದು ಆಗದೆ ತಕ್ಕ ಯೋಜನೆ ಹಾಗೂ ಪ್ರಯತ್ನಗಳು ಇದಕ್ಕೆ ಅವಶ್ಯಕ. ಎಂಥ ಬೇಸಗೆಯಲ್ಲಿಯೂ ಇಂಥ ಕಡೆ ನೀರಿನ ಒಂದು ಕನಿಷ್ಠ ಮಟ್ಟವನ್ನು ಕಾಪಾಡಿಕೊಳ್ಳಬೇಕು. ಅಲ್ಲದೆ ಆ ನೀರಿನ ಮಟ್ಟದ ಏರಿಳಿತಗಳೂ ಒಂದು ಮಿತಿಯೊಳಗಿರಬೇಕು. ಇಲ್ಲವಾದರೆ ಜಲಚರಗಳ ಆಹಾರಕ್ಕೆ ಅಗತ್ಯವಾದ ಕೆಲವು ಬಗೆಯ ನೀರೊಳಗಿನ ಸಸ್ಯಗಳ ಬೆಳವಣಿಗೆ ಆತಂಕವಾಗಿ ಈ ಪ್ರಾಣಿಗಳ ಅಭಿವೃದ್ಧಿ ಕುಂಠಿತವಾಗಬಹುದು. ಮಾನವನ ಗದ್ದಲ ಗೊಂದಲಗಳಿಗೂ ಇವು ದೂರವಾಗಿರಬೇಕು. 

	ಕೆಲವು ಕಡೆ ನದಿಗಳುದ್ದಕ್ಕೂ ಬಹಳ ಹಿಂದಿನಿಂದಲೂ ಜನಭರಿತ ಊರು ಪಟ್ಟಣಗಳು ಬೆಳೆದು ಬಂದಿದ್ದು ಅವುಗಳ ಹಲವಾರು ಅಗತ್ಯತೆಗಳಿಗಾಗಿ ಮತ್ತು ಸಾಮೀಪ್ಯದ ಸೌಕರ್ಯಕ್ಕಾಗಿ ನದಿಯಲ್ಲಿ ನಿಗದಿಯಾದ ಒಂದು ಕನಿಷ್ಠ ಮಟ್ಟವನ್ನು ಸದಾ ಉಳಿಸಿರಬೇಕಾಗುತ್ತದೆ. ಕೆಲವು ಕಡೆ ನದಿಯ ದಡಗಳಲ್ಲಿ ಕೈಗಾರಿಕೆಗಳು ಅಭಿವೃದ್ಧಿಗೊಂಡಿದ್ದು ಅವುಗಳಿಂದ ವಿಸರ್ಜಿಸಲ್ಪಟ್ಟ ನೀರು ನದಿಯ ನೀರಿನೊಡನೆಯೇ ಬೆರೆಯುತ್ತದೆ. ಕಾನೂನಿಗೆ ಅನುಗುಣವಾಗಿ ಇದನ್ನು ರಾಸಾಯನಿಕವಾಗಿ ಸಂಸ್ಕರಿಸಿರಬಹುದಾದರೂ ಮುಂದೆ ಹಲವು ರೀತಿ ಬಳಸಲ್ಪಡಬಹುದಾದ ಈ ನೀರಿನಲ್ಲಿ ಮಾಲಿನ್ಯದ ಸಾಂದ್ರತೆಯನ್ನು ಕಡಿಮೆ ಮಾಡಿ ತೆಳುವಾಗಿಸುವುದೂ ಕೆಲವು ವೇಳೆ ನದಿಯ ಪಾತ್ರದಲ್ಲಿ ಯಾವಾಗಲೂ ಒಂದು ಕನಿಷ್ಠ ಪರಿಮಾಣದ ಪ್ರವಾಹ ಇರುವಂತೆ ನೋಡಿಕೊಳ್ಳುವುದೂ ಅಗತ್ಯವಾಗಿರುತ್ತವೆ.

	ಅನಾದಿ ಕಾಲದಿಂದ ಒಂದು ಪಾತ್ರದಲ್ಲಿ ಹರಿಯುತ್ತಿದ್ದು ತನ್ನದೇ ಆದ ಪರಿಸರದ ಒಂದು ಸಮತೋಲವನ್ನು ಸಾಧಿಸಿಕೊಂಡಿರುವ ಯಾವುದೇ ನದಿಯ ಮಾರ್ಗದಲ್ಲಿ ಜಲಾಶಯ ಮುಂತಾದವುಗಳ ನಿರ್ಮಾಣಕ್ಕಾಗಿ ಅಡೆತಡೆಗಳನ್ನು ಒಡ್ಡಿದಾಗ ಉದ್ದೇಶ ಎಷ್ಟೇ ಒಳ್ಳೆಯದಿದ್ದರೂ ಆ ಸಮತೋಲ ಭಂಗವಾಗಿ ಹಲವು ಸಮಸ್ಯೆಗಳು ಉದ್ಭವಿಸುತ್ತವೆ. ಸಸ್ಯ, ಪ್ರಾಣಿ, ಮಾನವ ಜೀವನಗಳಿಗೆಲ್ಲ ಇದರ ಬಿಸಿ ತಟ್ಟುತ್ತದೆ. ತಡೆ ಹಿಡಿದ ನೀರಿನಿಂದ ಜಲವಿಸ್ತಾರ ವಿಶಾಲವಾಗಿ ಸಂಪದ್ಭರಿತ ಹಾಗೂ ಜನವಸತಿಯ ಪ್ರದೇಶಗಳು, ರಸ್ತೆ ಹಾಗೂ ರೈಲು ದಾರಿಗಳು, ಸೇತುವೆಗಳು ಮುಳುಗಡೆ ಆಗುತ್ತವೆ. ಈ ಸಂಬಂಧದ ಪುನರ್ವಸತಿ ಕಾರ್ಯ ಯೋಜನೆಯ ಒಂದು ಪ್ರಮುಖ ಅಂಗವಾಗಿರಬೇಕಾಗುತ್ತದೆ. ಮಾನವೀಯ ಸಮಸ್ಯೆಗಳ ಪರಿಹಾರ, ವನ್ಯಮೃಗಗಳ ಯುಕ್ತ ಸ್ಥಳಾಂತರ ಹಾಗೂ ರಕ್ಷಣೆ, ಸಸ್ಯ ಹಾಗೂ ಭೂಗರ್ಭ ಸಂಪತ್ತಿನ ಪೂರ್ವಯೋಜಿತ ಉಪಯೋಗ, ಧಾರ್ಮಿಕ ಹಾಗೂ ಪುರಾತತ್ತ್ವ ಮೌಲ್ಯಗಳುಳ್ಳ ಕಟ್ಟಡ ಹಾಗೂ ಸ್ಥಳಗಳ ರಕ್ಷಣೆ ಅಥವಾ ಸಂಪೂರ್ಣ ಪರಿಶೋಧನೆ ಇವೆಲ್ಲವನ್ನೂ ಪರಿಗಣಿಸಬೇಕಾಗುತ್ತದೆ. ಸಲೀಸಾಗಿ ನೀರು ಹರಿದು ಹೋಗುತ್ತಿದ್ದ ಸ್ಥಳಗಳು ಜೌಗಿಗೊಳಗಾಗಿ ಮಲೇರಿಯ ಮುಂತಾದ ರೋಗಗಳಿಗೆ ಆಸ್ಪದವಾಗಬಹುದು. ಲವಣಗಳ ಸಾಂದ್ರತೆಯಿಂದ ಭೂಮಿ ನಿಷ್ಟ್ರಯೋಜಕವಾಗಬಹುದು. ಇವುಗಳ ನಿವಾರಣೆಗೆ ನೀರು ಬಸಿದು ಹೋಗುವ ವ್ಯವಸ್ಥೆ ಮಾಡಬೇಕು. ನೀರಿನಲ್ಲಿ ಸಿಕ್ಕಿ ಕೊಳೆಯುವ ಸಸ್ಯ ಮತ್ತು ಪ್ರಾಣಿಗಳ ವಾಸನೆಯಿಂದ ಸುತ್ತಲ ವಾತಾವರಣ ಕಲುಷಿತವಾಗಬಹುದು. ಒಮ್ಮೆ ತುಂಬಿದ ಜಲಾಶಯದ ನೀರಿನ ಮಟ್ಟ ಕ್ರಮೇಣ ಕಡಿಮೆಯಾದಂತೆ ಅನಾವೃತವಾಗುವ ಒಳಾಯದ ದೃಶ್ಯ ಸುತ್ತಮುತ್ತಲಿನ ಸೌಂದರ್ಯಕ್ಕೆ ಘಾತಕವಾಗಿರುತ್ತದೆ. ಇವುಗಳಿಗೂ ಸಮರ್ಪಕ ಪರಿಹಾರ ಕಂಡುಕೊಳ್ಳಬೇಕು.

	ಇದೇ ರೀತಿ ಒಂದು ಯೋಜನೆಯಿಂದ ಪ್ರಯೋಜನ ಪಡೆಯುವ ಪ್ರದೇಶದಲ್ಲೂ ಯೋಗ್ಯ ಸಿದ್ಧತೆಗಳಾಗಿರಬೇಕು. ಇಲ್ಲವಾದರೆ ಬೆಳವಣಿಗೆ ಬಲು ನಿಧಾನವಾಗಿ ವಿನಿಯೋಗಿಸಿದ ಅಪಾರ ಬಂಡವಾಳಕ್ಕೆ ನ್ಯಾಯವಾದ ಲಾಭಾಂಶ ದೊರೆಯದೆ ತತ್ಕಾಲಕ್ಕಾದರೂ ಅದು ನಿರರ್ಥಕ ಎನ್ನಿಸಬಹುದು. ಇನ್ನೂ ಕೈಗೊಳ್ಳಬೇಕಾಗಿರುವ ಇಂಥ ಇತರ ಯೋಜನೆಗಳಿಗೆ ತೊಡಗಿಸಲು ಬಂಡವಾಳ ಕೂಡಿಸುವುದು ಕಷ್ಟಸಾಧ್ಯವಾಗಬಹುದು. ಈ ಪ್ರದೇಶದ ಜನರ ಆರ್ಥಿಕ ಸ್ಥಿತಿ ಹಾಗೂ ಸಾಹಸಪ್ರವೃತ್ತಿ ಅಷ್ಟೊಂದು ತೃಪ್ತಿಕರವಾಗಿರದೆ ಅಭಿವೃದ್ಧಿ ನಿಧಾನವಾಗುವ ಸಂಭವವಿರುವಾಗ ಸರ್ಕಾರ ಅಥವಾ ಸಾರ್ವಜನಿಕ ಆರ್ಥಿಕ ಸಂಸ್ಥೆಗಳಿಂದ ಸಯುಕ್ತ ಸಲಹೆ, ಉತ್ತೇಜನ ಹಾಗೂ ಸೌಲಭ್ಯಗಳ ನೀಡಿಕೆಯಿಂದ ಪ್ರಗತಿ ಸಾಧನೆಗೆ ಪ್ರಚೋದನೆ ದೊರೆಯಬೇಕಾಗುತ್ತದೆ. ಒಂದು ನದೀ ಕಣಿವೆ ಯೋಜನೆ ಯೋಜಿತ ರೀತಿಯಲ್ಲಿ ಕಾರ್ಯಗತವಾಗಿ ನಿರೀಕ್ಷಿತ ಸಾಫಲ್ಯ ನೀಡಬೇಕಾದರೆ ಈ ಎಲ್ಲ ಸಮಸ್ಯೆಗಳನ್ನೂ ಮನಗಂಡು ಆಳವಾಗಿ ಯೋಚಿಸಿ ತಾಂತ್ರಿಕ ದೃಷ್ಟಿಯಿಂದ ಯೋಜನೆಯ ವಿವಿಧ ಅಂಗಗಳ ನಿರ್ಮಾಣಕ್ಕೆ ಯೋಗ್ಯವಾದ ನಿವೇಶನಗಳ ಆಯ್ಕೆಯಿಂದ ಹಿಡಿದು ಅಭಿವೃದ್ಧಿಯ ಎಲ್ಲ ಹಂತಗಳ ಬಗೆಗೂ ಯುಕ್ತ ನಿರ್ಧಾರ ಹಾಗೂ ಕ್ರಮಗಳನ್ನು ಕೈಗೊಳ್ಳಲು ವಿವಿಧ ಇಲಾಖೆಗಳ ತಜ್ಞರು, ಉನ್ನತಾಧಿಕಾರಿಗಳು ಜನತಾ ಪ್ರತಿನಿಧಿಗಳು ಇರುವ, ಸಾಕಷ್ಟು ಅಧಿಕಾರ ಸ್ವಾತಂತ್ರ್ಯವಿರುವ ಮತ್ತು ಒಂದು ಇಡೀ ನದೀ ಕಣಿವೆಗೆ ಅನ್ವಯವಾಗುವ ಮಂಡಳಿಗಳನ್ನು ನೇಮಿಸುವ ಕ್ರಮ ಈಗ ಎಲ್ಲ ಕಡೆ ರೂಢಿಗೆ ಬರುತ್ತಿದೆ ಎನ್ನಬಹುದು.

	ಉತ್ತರ ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿನ ಟೆನೆಸಿ ಕಣಿವೆ ಯೋಜನೆಯನ್ನು ಇಂಥ ಸಮಗ್ರ ನದೀ ಕಣಿವೆ ಯೋಜನೆಗಳಲ್ಲಿ ಪ್ರಥಮವೂ ಭಾರಿಯದೂ ಎನ್ನಬಹುದು. ಸ್ವಾತಂತ್ರ್ಯ ಗಳಿಕೆಯ ತರುವಾಯದ ಭಾರತದಲ್ಲಿ ಶತದ್ರು ನದಿಯ ಭಾಕ್ರನಂಗಾಲ್ ಯೋಜನೆ, ದಾಮೋದರ್ ನದೀಕಣಿವೆ ಯೋಜನೆ, ಹಿರಾಕುಡ್ (ಮಹಾನದಿ)ಯೋಜನೆ, ತುಂಗಭದ್ರ, ಕೋಸಿ, ಚಂಬಲ್ ಮುಂತಾದವು ಈ ದಿಶೆಯಲ್ಲಿನ ದಿಟ್ಟ ಹೆಜ್ಜೆಗಳು. ಉದಾಹರಣೆಗೆ ದಾಮೋದರ್ ಕಣಿವೆ ಯೋಜನೆಯ ಕೆಲವು ಪ್ರಮುಖ ಅಂಶಗಳನ್ನು ಇಲ್ಲಿ ಪ್ರಸ್ತಾಪಿಸಬಹುದು. ಗಂಗಾನದಿಯ ಉಪನದಿಯಾದ ದಾಮೋದರ್ ಪ್ರತಿವರ್ಷ ಪ್ರವಾಹದಿಂದ ಬಿಹಾರ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಮಾಡುತ್ತಿದ್ದ ಅಪಾರ ಹಾನಿಗಾಗಿ ಕುಪ್ರಸಿದ್ಧವಾಗಿತ್ತು. ಇದನ್ನು ಪಳಗಿಸಿ ಪ್ರಯೋಜನಕಾರಿಯಾಗಿಸುವುದೇ ಯೋಜನೆಯ ಮುಖ್ಯ ಉದ್ದೇಶ. ಇದನ್ನು ಬಂಧಿಸಲು ಇದಕ್ಕೂ ಇದರ ಉಪನದಿಗಳಿಗೂ ನಾಲ್ಕು ಕಡೆ ಕಟ್ಟೆಗಳನ್ನು ಕಟ್ಟಲಾಯಿತು. ಬಾರಕರ್ ಉಪನದಿಯ ಮೇಲು ಭಾಗದಲ್ಲೇ ತಿಲೈಯ ಎಂಬಲ್ಲಿ 351 ಮೀ ಉದ್ದ 28.65 ಮೀ ಎತ್ತರದ ಕಾಂಕ್ರೀಟಿನ ಅಡ್ಡಗಟ್ಟೆ ಹಾಕಿ ನೀರನ್ನು ಶೇಖರಿಸಿ 4,000 ಕಿವಾ ವಿದ್ಯುತ್ತನ್ನು ಉತ್ಪಾದಿಸಲು ಅನುಮಾಡಲಾಯಿತು (1953). ಕೋನಾರ್ ಉಪನದಿಗೆ ಅಡ್ಡ 50 ಮೀ ಎತ್ತರ 110 ಮೀ. ಉದ್ದದ ಕಾಂಕ್ರಿಟ್ ಅಡ್ಡಕಟ್ಟೆ, ಜೊತೆಗೆ ಒಟ್ಟು ಸುಮಾರು 3,658 ಮೀ. ಉದ್ದದ ಮಣ್ಣಿನ ಏರಿಗಳನ್ನು ಹಾಕಿ ಸಂಗ್ರಹಿಸಿದ ನೀರಿನಿಂದ 40,000 ಕಿವಾ ವಿದ್ಯುತ್ ಉತ್ಪಾದಿಸುವಂತಾಯಿತು (1954). ಮತ್ತೆ ಬಾರಕರ್ ನದಿಗೆ ಇನ್ನೂ ಕೆಳಗಡೆ 48 ಮೀ. ಎತ್ತರದ 396 ಮೀ. ಉದ್ದದ ಕಾಂಕ್ರಿಟ್ ಅಡ್ಡಕಟ್ಟೆ ಸುಮಾರು 3,200 ಮೀ. ಉದ್ದದ ಮಣ್ಣಿನ ಏರಿಗಳನ್ನು ಹಾಕಿ ಮೈಥಾನ್ ಜಲಾಶಯವನ್ನು ನಿರ್ಮಿಸಿ ಅಲ್ಲಿ 60,000 ಕಿವಾ ವಿದ್ಯುತ್ ಉತ್ಪತ್ತಿ ಆಗುವಂತಾಯಿತು (1956). ಇವು ಮೂರಕ್ಕೂ ದೊಡ್ಡದಾದ ಒಂದು ಕಟ್ಟೆಯನ್ನು (41 ಮೀ ಎತ್ತರ 358 ಮೀ ಉದ್ದ ಕಾಂಕ್ರಿಟ್ ಭಾಗ ಹಾಗೂ 6,139 ಮೀ ಉದ್ದ ಮಣ್ಣಿನ ಏರಿಗಳು) ಪಾನ್‍ಶೆಟ್‍ಹಿಲ್ ಎಂಬಲ್ಲಿ ಕಟ್ಟಿ ಮತ್ತೆ 40,000 ಕಿವಾ ವಿದ್ಯುತ್ ಪಡೆಯಲಾಯಿತು (1958). ಈ ನಾಲ್ಕೂ ಜಲಾಶಯಗಳಲ್ಲಿ ಸಂಗ್ರಹಿಸಿದ ನೀರನ್ನು ವಿದ್ಯುದುತ್ಪಾದನೆಯ ಬಳಿಕ ಮತ್ತೆ ತಡೆಹಿಡಿದು ನೀರಾವರಿಗೆ ಉಪಯೋಗಿಸಿಕೊಳ್ಳಲಾಗುವಂತೆ ದುರ್ಗಾಪುರದ ಬಳಿ 11.6 ಮೀ ಎತ್ತರದ ಅಣೆಕಟ್ಟು ಹಾಕಿ (1958) ನೀರಾವರಿ, ನೌಕಾ ಸಾರಿಗೆಗಳೆರಡಕ್ಕೂ ಉಪಯೋಗವಾಗುವಂತೆ ಒಂದು ಕಡೆ 145 ಕಿಮೀ ಉದ್ದದ ಪ್ರಧಾನ ನಾಲೆಯಿಂದ ಗಂಗಾನದಿಯ ಒಂದು ಶಾಖೆಯಾದ ಹೂಗ್ಲಿಯೊಡನೆ ಸಂಪರ್ಕ ಕಲ್ಪಸಲಾಯಿತು. ಇನ್ನೂ 195 ಕಿಮೀಗಳ ಪ್ರಧಾನ ನಾಲೆಯೂ ಅದರ ಸೀಳು ನಾಲೆಗಳೂ ಸೇರಿ ಸುಮಾರು 2,414 ಕಿಮೀ ಇರುವ ಕಾಲುವೆಗಳಿಂದ ನೀರಾವರಿ ಆಗುವ ವಿಸ್ತಾರ ಸುಮಾರು 4,04,695 ಹೆಕ್ಟೇರುಗಳು. ಯೋಜನಾಪೂರ್ವದಲ್ಲಿ ಕಣಿವೆಯ ಕೆಳಪ್ರದೇಶದಲ್ಲಿ ಇರುತ್ತಿದ್ದ ಗರಿಷ್ಠ ಪ್ರವಾಹ ಪ್ರತಿ ಸೆಕೆಂಡಿಗೆ 28,371 ಘನಮೀಟರುಗಳೇರುತ್ತಿದ್ದುದನ್ನು ಈಗ ಸುಮಾರು 18,406ಕ್ಕೆ ಇಳಿಸಲಾಗಿದೆ ಎಂಬುದೂ ಗಮನಾರ್ಹ. ಹೀಗೆ ಈ ಯೋಜನೆಯಿಂದ ಪ್ರವಾಹ ನಿಯಂತ್ರಣ, ವಿದ್ಯುದುತ್ಪಾದನೆ, ನೀರಾವರಿ, ನೌಕಾಸಾರಿಗೆ ಸೌಲಭ್ಯ ಇವುಗಳ ಜೊತೆಗೆ ಕೈಗಾರಿಕೆಯ ಅಭಿವೃದ್ಧಿ, ವಿದ್ಯುತ್ ರೈಲು ಸೌಕರ್ಯ ಮುಂತಾದವುಗಳಿಂದ, ಹಿಂದೆ ಕಾಲಕಾಲಕ್ಕೆ ಸಂಭವಿಸುತ್ತಿದ್ದ ಪ್ರಳಯದ ಶಾಪ ವಿಮೋಚನೆಯಾಗಿ ಆ ಪ್ರದೇಶಕ್ಕೆ ಇಂದು ಸರ್ವತೋಮುಖ ಅಭಿವೃದ್ಧಿ, ಸುಖಶಾಂತಿಗಳು ಲಭಿಸುವಂತಾಗಿವೆ.

	ಇಂಥ ನದೀ ಕಣಿವೆ ಯೋಜನೆಗಳನ್ನು ಹಾಕಿಕೊಂಡು, ಕಾರ್ಯಗತಗೊಳಿಸಿ, ಪ್ರಕೃತಿ ನೀಡಿರುವ ಸಂಪನ್ಮೂಲ ಪೋಲಾಗಲು ಅಥವಾ ಶಾಪವಾಗುವ ಬದಲು ವರವಾಗಿ ಪರಿಣಮಿಸುವಂತೆ ಮಾಡಿ ಸರ್ವೋದಯವನ್ನು ಸಾಧಿಸುವ ಸದವಕಾಶಗಳು ಸಾಕಷ್ಟಿವೆ ಎಂಬುದನ್ನು ಮನಗಾಣಬೇಕು.						   (ಕೆ.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ